Verse 1

ಸರ್ವೇಶ ಪುತ್ರ ಜೀವ ತೇಜ
ನೀ ಭಕ್ತರಾತ್ಮ ಪಾಲನೆ.
ನಾನೆನ್ನ ದೇಹ ಆತ್ಮಪ್ರಾಣ
ನಿಂಗೈಯ್ಯ ವಶ ಮಾಡುವೆ.
ನಂಗಾಗಿ ನಾನು ಬಾಳಲಾರೆ
ನೀನಿಲ್ಲದೆ ನಾ ಹೋಗಲಾರೆ
ಹಾದೀಲಿ ಹೆಚ್ಚು ಮುಂದಕೆ.
ಆಲೈಸಿ ನನ್ನ ಮೊರೆಯನ್ನು
ಸನ್ಮಾರ್ಗದಲ್ಲಿ ನೀನೆನ್ನನ್ನು
ದಿನಾಲು ನಡಿಸೀಶನೇ.

Verse 2

ನೀ ನಡಿಸಲು ನಾನು ಬೀಳೆ
ನೀ ಕಣ್ಣು ಸೌಜ್ಞೆಯಿಂದಲೇ
ನಮ್ಮನ್ನು ನಡಿಸುವದಕ್ಕೆ
ವಾಗ್ದಾನ ಕೊಟ್ಟಿಯಲ್ಲವೇ?
ನೀ ದಯವಿಟ್ಟರೆಂಗೆ ಸಾಕು
ಗುರಾಣಿ ಸೂರ್ಯ ನೀನೆ ಆಗು
ಅಶಕ್ತನಾದ ನನಗೆ.
ಎಲ್ಲಾದರಲ್ಲಿ ನಿನ್ನಾಶ್ರಯ
ಎಲ್ಲಾದರಲ್ಲಿ ನಿನ್ನ ದಯ
ನಂಗಿರೆ ಮಹಾ ಭಾಗ್ಯವೇ.

Verse 3

ಸುಶಾಂತಿಗನುಕೂಲವಾದ
ಸನ್ಮಾರ್ಗ ಯಾವದೆಂಬದು
ನೀ ಮಾತ್ರ ಬಲ್ಲೆ ನಾಶಕರ
ದುರ್ಮಾರ್ಗಕ್ಕೆನ್ನ ತಪ್ಪಿಸು.
ನಿನ್ನನ್ನು ನಾನು ಬಿಡದಂತೆ
ಪ್ರಪಂಚಭ್ರಾಂತನಾಗದಂತೆ
ಕಾಪಾಡೆನ್ನನ್ನು ನಿತ್ಯವು.
ಸದೃಢವಾದ ಶಕ್ತಿಯನ್ನು
ಬಿನ್ನೈಸಲಿಕ್ಕಾಸಕ್ತಿಯನ್ನು
ನನ್ನಲ್ಲಿ ಕರ್ತ ಹುಟ್ಟಿಸು.

Verse 4

ವಿಧೇಯವಾದ ಬಾಲನಂತೆ
ನಾ ನಿನ್ನ ಚಿತ್ತ ನಿತ್ಯವು
ಸದ್ಭಾವದಿಂದ ಮಾಡುವಂತೆ
ನಿನ್ನಾತ್ಮ ದಯಪಾಲಿಸು.
ನೀನಿಲ್ಲದೆ ಸಂತೋಷ ಎಲ್ಲಿ?
ನಿನ್ನತಿಶ್ರೇಷ್ಠ ನಾಮದಲ್ಲಿ
ನಾನಭಿಮಾನ ಪಡುವೆ.
ಇದೊಂದೆ ನನ್ನ ನಿಜ ಗುರಿ
ಇದೊಂದೆ ನನ್ನ ಆತ್ಮದುರಿ
ಇದೊಂದೆ ನನ್ನ ಜೀವಿಕೆ.

Verse 5

ದಿನಾಲು ಜಪ ಮಾಡಲಿಕ್ಕೆ
ನಿನಾತ್ಮ ದಯಪಾಲಿಸು.
ಸದ್ವಾಕ್ಯವನ್ನು ಕೇಳಲಿಕ್ಕೆ
ಸುಮನಸ್ಸನ್ನು ಹುಟ್ಟಿಸು.
ಸುಚಿತ್ತಕ್ಕನುಸಾರವಾಗಿ
ಸದ್ಭಕ್ತಿಗನುಗುಣವಾಗಿ
ನನ್ನುಡಿ ನಡೆ ರೂಪಿಸು.
ನನ್ನಲ್ಲಿ ಹೊಸ ಜೀವವನ್ನು
ಸುವಾರ್ತಾವಾಕ್ಯ ಫಲವನ್ನು
ಸುನಾಥನೇ ಸಂವರ್ಧಿಸು.

Verse 6

ಹೀಗಾಗರೆನ್ನ ಭಾಗ್ಯವನ್ನು
ಯಾವಾತ ವರ್ಣಿಸುವನು?
ಸಂಪೂರ್ಣವಾದ ತೃಪ್ತಿಯನ್ನು
ಕ್ರಿಸ್ತ್ಯೇಸು ನಂಗೆ ಕೊಟ್ಟನು.
ವಿಮುಕ್ತವಾದ ನನ್ನ ಮನ
ಯಾವಾಗ್ಯೂ ಸ್ವಾಮಿಸೇವೆಯನ್ನು
ಮಾಡೋದಾನಂದದಿಂದಲೆ.
ಅಸ್ಥಿರ ಲೋಕ ಬೇಡ ಯೇಸು
ಮೇಲ್ಲೋಕ ಒಂದೆ ನಂಗೆ ಲೇಸು
ಅದನ್ನೆ ನಿತ್ಯ ಬಯ್ಸುವೆ.

Go to top