Verse 1

ಆಕಾಶದಿಂದ ಬಂದೆನು
ಸುವರ್ತಮಾನ ತಂದೆನು
ನಾ ಸಾರುವೀ ಸುವಾರ್ತೆಯು
ವಿಶೇಷವಾಗಿ ದೊಡ್ಡದು.

Verse 2

ಕನ್ಯಾಸ್ತ್ರೀಯಿಂದ ನಿಮಗೆ
ಈ ಹೊತ್ತು ಕೂಸು ಹುಟ್ಟ್ಯದೆ
ಸೌಂದರ್ಯವಾದ ಮಗುವು
ಅದಾತ್ಮ ತೃಪ್ತಿಮೂಲವು.

Verse 3

ಅದಾರು? ಕ್ರಿಸ್ತ ಯೇಸುವು
ಪರಾತ್ಪರೈಕ್ಯಪುತ್ರನು
ಸಮಸ್ತ ಪಾಪಕಷ್ಟವ
ಕೊಂಡ್ಹೋಗುವಂಥ ರಕ್ಷಕ.

Verse 4

ಸೌಭ್ಯಾಗ್ಯ ನಿಮಗೋಸ್ಕರ
ಯೆಹೋವ ಸಿದ್ಧ ಮಾಡಿದ
ನಮ್ಮಂತೆ ನೀವು ದಿವದಿ
ನಿರಂತ್ರ ಬಾಳುತಿರ್ವಿರಿ.

Verse 5

ಆ ಗುರುತನ್ನು ನೋಡಿರಿ
ಆ ಬಟ್ಟೆಯುಳ್ಳ ಗೋದಲಿ
ಸಮಸ್ತ ಲೋಕದೊಡೆಯ
ಅಲ್ಲ್ಯವತಾರ ಮಾಡಿದ.

Verse 6

ನಾವೀಗಲೆದ್ದು ಕುರ್ಬರ
ಹಿಂದಟ್ಟಿ ಅಲ್ಲಿಗ್ಹೋಗುವ
ಆಶ್ಚರ್ಯವನ್ನು ಕಣ್ಬರೆ
ನಮ್ಮೊಳಗಿಚ್ಛೆ ಇರದೇ?

Verse 7

ಚೆನ್ನಾಗಿ ನೋಡು ಮನವೆ
ಆ ಗೋದಲೀಲಿ ಏನದೆ?
ಆ ಚೆಲ್ವ ಕೂಸು ಯಾರದು?
ಸರ್ವೇಶಪ್ರಿಯಪುತ್ರನು.

Verse 8

ರಾಜಾಧಿರಾಜ ವಂದನೆ
ನೀ ಪಾಪಿ ಬೇಡವೆನ್ನದೆ
ನರಾವತಾರ ಎತ್ತಿದ್ದು
ಮಹಾಂತಪ್ರೇಮಸಾಕ್ಷಿಯು.

Verse 9

ಸಮಸ್ತ ಲೋಕದೊಡೆಯ
ಏನಾದಿ ನನಗೋಸ್ಕರ
ರಾಜತ್ವಸ್ಥಾನವಗಲಿ
ದೀನತ್ವದಲ್ಲಿ ಸೇರಿದಿ.

Verse 10

ಈ ಲೋಕವೆಲ್ಲ ರತ್ನದ್ದು
ಭಂಗಾರ ತುಂಬಿದ್ದಾದರು
ಶ್ರೀ ದೇವಪುತ್ರ ನಿನಗೆ
ಅದೇನು? ಬರೇ ಕಸವೇ.

Verse 11

ಪ್ರಪಂಚ ಘನ ಮಹಿಮೆ
ಅಬದ್ಧವೆಂತ ತೋರಿಸ
ಲೋಕೇಶ ಗೋದ್ಲಿ ಹುಲ್ಲಲಿ
ನೀ ಮಲ್ಗಿಕೊಂಡು ಇರುತಿ.

Verse 12

ಹೃತ್ಪ್ರಿಯವಾದ ಮಗುವೆ
ನಿವಾಸ ಮಾಡೆನ್ನೊಳಗೆ
ನಿನ್ನನ್ನು ಮರ್ಯದೆಂದಿಗು
ಕೊಂಡಾಡಿ ಹರ್ಷಗೊಂಬೆನು.

Verse 13

ಸ್ವಪುತ್ರನನ್ನು ನಮಗೆ
ಕೊಟ್ಟೊಡೆಯಂಗೆ ಮಹಿಮೆ
ಸುಕಾಲ ಶುರುವಾಯಿತು
ಜಗತ್ತೆ ಸಲೆ ಹರ್ಷಿಸು.

Go to top