Verse 1

ಕ್ರಿಸ್ತನು ಬಂದನನಂತ ಸಂತೋಷ
ಭೂಪತಿ ಆತನು ನೋಡಿರಹ
ಸಾರಿರೆಲ್ಲೆಲ್ಲು ಈ ವಾರ್ತೆಯ ಘೋಷ
ದೈವಿಕ ಮಾನವ ಭಾವದವ
ಆನಂದ ಕಾರಣ ಕ್ರಿಸ್ತನು ಬಂದ.
ನಮಿಸಿರರ್ಪಿಸಿ ಸ್ತೋತ್ರಸುಗಂಧ.

Verse 2

ದೇವಕುಮಾರನು ಸ್ವರ್ಗದ ಪೀಠ
ತೊರೆದು ನಮ್ಮನ್ನು ಹುಡುಕುತ್ತ
ಬನ್ನಿರಿ ಹೊಂದಿರಿ ಜೀವಕಿರೀಟ
ಅನ್ನುತ ನೀಚರನ್ನೇರಿಸಿದ.
ಸ್ವರ್ಗದ ಭೂಷಣ ಕ್ರಿಸ್ತನು ಬಂದ
ನಮಿಸಿರರ್ಪಿಸಿ ಸ್ತೋತ್ರಸುಗಂಧ.

Verse 3

ಪಾಪದ ಶಾಪದ ಮೃತಿಯಪಾಶ
ಆತನ ಮೂಲಕ ಹರದವೆ.
ಗೈದ ಬಲಿಷ್ಠನ ದುರ್ಗ ವಿನಾಶ
ಕೈದಿಗೆ ಬಾಗಲು ತೆರೆದದೆ.
ಪಾಪವಿನಾಶಕ ಕ್ರಸ್ತನು ಬಂದ.
ನಮಿಸಿರರ್ಪಿಸಿ ಸ್ತೋತ್ರಸುಗಂಧ.

Verse 4

ಸೈನ್ಯಗಳೀಶನ ಸ್ವಾಗತಕಾಗಿ
ಸೃಷ್ಟಿಯ ದ್ವಾರವು ತೆರೆಯಲಿ
ಕ್ರೈಸ್ತರೆ ಆಂತರ್ಯ ಭೂಷಿತರಾಗಿ
ಶುದ್ಧ ಸದ್ಗುಣದಿ ಶೋಭಿಸಿರಿ
ಘನದ ರಾಜನು ಕ್ರಿಸ್ತನು ಬಂದ.
ನಮಿಸಿರರ್ಪಿಸಿ ಸ್ತೋತ್ರಸುಗಂಧ.

Verse 5

ಶಿಲುಬೆ ಕಂಬದಿ ಪ್ರಾಣಬಿಟ್ಟಾಗ
ಲೋಕದ ಪಾಪವ ತಗೆದನು.
ನೋಡಿರೀ ತ್ಯಾಗವ ನೋಡಿರೀಯಾಗ
ದಾಸಗೆ ಮಡಿದನೊಡೆಯನು.
ದುರಿತಹರನು ಕ್ರಿಸ್ತನು ಬಂದ
ನಮಿಸಿರರ್ಪಿಸಿ ಸ್ತೋತ್ರಸುಗಂಧ.

Verse 6

ಎದ್ದನು ಪುನಹ ಗೋರಿಯೊಳಿಂದ
ಸಾವಿನ ಕೊಂಡಿಯ ಮುರಿದನು.
ಅಳದೆ ಬನ್ನಿ ಸಮಾಧಿಗಳಿಂದ
ಬಿತ್ತಿದ ಗೋದಿಯು ಫಲಿಸಿತು
ಜೀವದ ನಾಯಕ ಕ್ರಸ್ತನು ಬಂದ.
ನಮಿಸಿರರ್ಪಿಸಿ ಸ್ತೋತ್ರಸುಗಂಧ.

Verse 7

ದುಃಖಿತ ಭಕ್ತರೆ ಮೇಲಕೆ ನೋಡಿ
ನಿಮ್ಮ ಸಹಾಯಕ ಬರುವನು
ಆತನನ್ನೆದುರುಗಾಣಲು ಓಡಿ
ಬೇಗನೆ ಬರುವೆನಂದಿದ್ದನು
ದುಃಖನಿವಾರಕ ಕ್ರಿಸ್ತನು ಬಂದ.
ನಮಿಸಿರರ್ಪಿಸಿ ಸ್ತೋತ್ರಸುಗಂಧ.

Verse 8

ಲೋಕವೆ ಕೇಳು ಇನ್ನೆಚ್ಚರವಾಗು
ಬರುವ ನ್ಯಾಯವಿಚಾರಣೆಗೆ
ಬರುವ ಮೊದಲು ತಿರುಗಿ ಸಾಗು
ನಂಬುತ ನಮಿಸುದ್ಧಾರಕಗೆ
ಪ್ರೀತಿ ಸ್ವರೂಪನು ಕ್ರಸ್ತನು ಬಂದ.
ಹಬ್ಬಲೆಲ್ಲೆಲ್ಲು ಈ ವಾರ್ತೆಸುಗಂಧ.

Go to top